Thursday 6 March 2014

ದುಡುಕು ಬುದ್ಧಿಯ ಪಾಶ್ಚಿಮಾತ್ಯರ "ಯುದ್ಧ ಪತ್ರಿಕೋದ್ಯಮ"

ಉಕ್ರೇನಿನ ಕ್ರೈಮಿಯಾ ಸ್ವಾಯತ್ತ ಪ್ರದೇಶಕ್ಕೆ ಹದಿನಾರು ಸಾವಿರ ಸೈನಿಕರನ್ನ ಕಳಿಸಿದ ರಷ್ಯಾ

ರಷ್ಯಾದ ಅತಿಕ್ರಮಣದಿಂದ ಉಲ್ಬಣಗೊಂಡ ಉಕ್ರೇನ್ ಬಿಕ್ಕಟ್ಟು

ಒಬಾಮ ಉಕ್ರೇನ್ ಬಿಕ್ಕಟ್ಟಿನ ಶಮನಕ್ಕೆ ಏನು ಮಾಡಬಲ್ಲರು


ಈ ರೀತಿಯ ಓತಪ್ರೋತ ಮುಖ್ಯಾಂಶಗಳನ್ನ ಪಾಶ್ಚಿಮಾತ್ಯ ಪತ್ರಿಕೋದ್ಯಮ, ಅಮೇರಿಕ ಮತ್ತಿತರ ಯುರೋಪಿಯನ್ ರಾಷ್ಟ್ರಗಳಲ್ಲಿ ತಮ್ಮ ಪತ್ರಿಕೆಗಳ ಮುಖಾಂತರ ಹಬ್ಬಿಸುತ್ತಿದ್ದರೆ ನಮ್ಮ ಭಾರತೀಯ ಪತ್ರಿಕೋದ್ಯಮ ಕೂಡ ಅದನ್ನ ಹಾಗೆಯೇ ಭಟ್ಟಿ ಇಳಿಸಿ ನಮಗೂ ಉಣಬಡಿಸಿತು! ಕ್ರೈಮಿಯಾ ಸ್ವಾಯತ್ತ ಪ್ರದೇಶ, 1997 ರ ಒಪ್ಪಂದ; ಮೊದಲಾದವುಗಳ ಬಗ್ಗೆ  ಸಂಶೋಧಿಸಿ ಬರೆಯುವ ತಾಳ್ಮೆ ಯಾವ ಪತ್ರಕರ್ತನಿಗೂ ಇದ್ದಂತಿರಲಿಲ್ಲ! ರಷ್ಯಾದ ಅಧಿಕಾರಿಗಳು ನಾವು ಯುದ್ಧ ಮಾಡ ಹೊರಟಿಲ್ಲ ಎಂದು ಅದೆಷ್ಟು ಬೊಬ್ಬಿಟ್ಟರೂ ಅವರನ್ನ ಕೇಳುವ ವ್ಯವಧಾನ ಯಾರೊಬ್ಬರಿಗೂ ಇರಲಿಲ್ಲ.
ಆದರೆ ಈಗ ನಿಜಾಂಶಗಳು ನಿಧಾನವಾಗಿಯಾದರೂ ಹೊರಬರುತ್ತಿವೆ.

ಭೂಪಟದಲ್ಲಿ ಕ್ರೀಮಿಯಾ



ಈ ಕೆಳಗಿನ ಅಂಶಗಳನ್ನ ಗಮನಿಸಿ:

1. ಕ್ರೈಮಿಯಾ ಸ್ವಾಯತ್ತ ಪ್ರದೇಶದಲ್ಲಿರುವ ಸೆವಸ್ತೊಪೋಲ್ ಎಂಬ ನಗರದಲ್ಲಿ 1783 ರಿಂದಲೂ ರಷ್ಯನ್ ನೌಕಾಪಡೆ ಬೀಡು ಬಿಟ್ಟಿದೆ. ಗ್ರಿಗೊರಿ ಪೊಟೆಂಕಿನ್ ಎಂಬ ರಷ್ಯಾದ ದೊರೆ ಸ್ಥಾಪಿಸಿದ ಈ ನಗರದಲ್ಲಿ ಈಗಲೂ ರಷ್ಯಾದ ಕಪ್ಪು ಸಮುದ್ರ ನೌಕಾಪಡೆ ಹಾಗೂ ಉಕ್ರೇನಿನ ನೌಕಾಪಡೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸುತ್ತವೆ. 1954 ರಲ್ಲಿ ನಿಕಿತಾ ಕ್ರುಶ್ಚೇವ್, ಉಕ್ರೇನಿಗೆ  ಕ್ರೈಮಿಯಾ ಪ್ರದೇಶವನ್ನು ಬಿಟ್ಟುಕೊಟ್ಟದ್ದು.
ರಷ್ಯಾ ಹಾಗೂ ಉಕ್ರೇನ್ ನೌಕಾಪಡೆಯ ಸೈನಿಕರು ಸೆವಸ್ತೊಪೋಲ್ ನಲ್ಲಿ ನೌಕಾದಿನದಂದು ಪಥಸಂಚಲನ ನಡೆಸುತ್ತಿರುವುದು.


2. ಸೋವಿಯತ್ ಒಕ್ಕೂಟ ಮುರಿದು ಬಿದ್ದ ಆರು ವರ್ಷಗಳ ನಂತರ, ಅಂದರೆ 1997ರಲ್ಲಿ ರಷ್ಯಾ ಹಾಗೂ ಉಕ್ರೇನ್ ಒಂದು ಒಪ್ಪಂದ ಮಾಡಿಕೊಂಡವು. ಆ ಒಪ್ಪಂದದ ಪ್ರಕಾರ  ಕ್ರೈಮಿಯಾ ಪ್ರದೇಶದಲ್ಲಿದ್ದ ತನ್ನ ನೌಕಾಪಡೆಯ 81% ಭಾಗವನ್ನ ರಷ್ಯಾ, 526.5 ದಶಲಕ್ಷ ಡಾಲರ್ ಕೊಟ್ಟು ಖರೀದಿ ಮಾಡಿತು.   

3. ಅದೇ ಒಪ್ಪಂದದ ಪ್ರಕಾರ ರಷ್ಯಾದ ನೌಕಾಪಡೆ 2017ರವರೆಗೂ  ಕ್ರೈಮಿಯಾದಲ್ಲಿರಬಹುದೆಂದು ನಿರ್ಧಾರವಾಗಿತ್ತು. 2010ರಲ್ಲಿ ಅದನ್ನ 2042ರವರೆಗೂ ವಿಸ್ತರಿಸಲಾಯಿತು.

4. ಉಕ್ರೇನ್ ದೇಶ ತನಗೆ ಮಾಡುತ್ತಿರುವ ಸಾಲ ಮರುಪಾವತಿಯಲ್ಲಿ ಪ್ರತೀ ವರ್ಷ 97.75 ದಶಲಕ್ಷ ಡಾಲರ್ ಹಣವನ್ನ ಮನ್ನಾ ಮಾಡುತ್ತಿರುವ ರಷ್ಯಾ ಅದಕ್ಕೆ ಬದಲಾಗಿ ಉಕ್ರೇನಿಗೆ ಸೇರಿದ ಕಪ್ಪು ಸಮುದ್ರದ ಪ್ರದೇಶದಲ್ಲಿ ತನ್ನ ನೌಕಾಪಡೆ ಓಡಾಡುವ ಹಕ್ಕು ಪಡೆದುಕೊಂಡಿದೆ. ಅಷ್ಟೇ ಅಲ್ಲದೆ  ಕ್ರೈಮಿಯಾ ಪ್ರದೇಶದಲ್ಲಿ 25,000 ಸೈನಿಕರನ್ನ ಇರಿಸುವ ಹಕ್ಕನ್ನ ಕೂಡ ಹೊಂದಿದೆ. (ಸಧ್ಯ ಅಲ್ಲಿ ಬೀಡು ಬಿಟ್ಟಿರುವ ಸೇನೆಯ ಸಂಖ್ಯೆ ಅಂದಾಜು 15 ರಿಂದ 16 ಸಾವಿರ)

ಕ್ರೈಮಿಯಾ ಸ್ವಾಯತ್ತ ಪ್ರದೇಶ ಭಾವನಾತ್ಮಕವಾಗಿ ರಷ್ಯಾ ಹಾಗೂ ಉಕ್ರೇನ್ ಎರಡೂ ದೇಶಗಳಿಗೂ ಬಹಳ ಸೂಕ್ಷ್ಮ ಪ್ರದೇಶ. ಸುಮಾರು 20 ಲಕ್ಷ ಜನಸಂಖ್ಯೆ ಇರುವ ಈ ಭೂಪ್ರದೇಶದಲ್ಲಿ 60% ರಷ್ಯನ್ನರೇ ಇರುವ ಕಾರಣ (25% ಉಕ್ರೇನಿಯನ್ನರಾದರೆ ಉಳಿದ 15% ಕ್ರೀಮಿಯನ್ನರು) ; ರಷ್ಯಾ ಸರ್ಕಾರ ಸ್ವಾಭಾವಿಕವಾಗಿಯೇ ಇದರ ಮೇಲೆ ಒಂದು ಹದ್ದಿನ ಕಣ್ಣಿಟ್ಟಿರುತ್ತದೆ.

ಇತ್ತೀಚಿಗಷ್ಟೇ ಪತನಗೊಂಡ ಉಕ್ರೇನ್ ಸರ್ಕಾರದ ಜಾಗದಲ್ಲಿ ಎದ್ದು ನಿಂತಿರುವ ಹೊಸ ಸರ್ಕಾರ, ಈ ಸ್ವಾಯತ್ತ ಪ್ರದೇಶವೂ ಸೇರಿದಂತೆ, ಉಕ್ರೇನಿನೆಲ್ಲೆಡೆ ಉಕ್ರೇನಿಯನ್ ಬಿಟ್ಟರೆ ಬೇರಾವ ಭಾಷೆಯನ್ನೂ ಅಧಿಕೃತವಾಗಿ ಬಳಸುವಂತಿಲ್ಲ ಎಂಬ ಆದೇಶ ಹೊರಡಿಸಿದೆ. ಇದರಿಂದ ಕುಪಿತಗೊಂಡಿರುವ ರಷ್ಯಾದ ಸಂಯುಕ್ತ ಮಂತ್ರಾಲಯ ಅದಾಗಲೇ, ಅಗತ್ಯ ಬಿದ್ದಲ್ಲಿ ಹೆಚ್ಚುವರಿ ಪಡೆಯನ್ನ  ಕ್ರೈಮಿಯಾಗೆ ಕಳಿಸಲು ಒಪ್ಪಿಗೆ ನೀಡಿದೆ. ಪುಟಿನ್ ಈ ನಿಟ್ಟಿನಲ್ಲಿ ಹೇಗೆ ಮುಂದುವರೆಯುತ್ತಾರೆ ಎಂಬುದನ್ನ ಮಾತ್ರ ಕಾದು ನೋಡಬೇಕಿದೆ.

ಭಾಷೆಯ ವಿಚಾರದಲ್ಲಿ ನಡೆದ ಸ್ವಾತಂತ್ರ ಸಂಗ್ರಾಮವೊಂದು ನಮ್ಮ ಪಕ್ಕದ ಮನೆಯಂತಿರುವ ಬಾಂಗ್ಲಾದಲ್ಲೇ ಹಿಂದೆ ನಡೆದಿದ್ದನ್ನ ನಾವು ಕಂಡಿದ್ದೇವೆ. ಆ ರಕ್ತಸಿಕ್ತ ಸಂಗ್ರಾಮದಲ್ಲಿ ಲಕ್ಷಾಂತರ ಮಂದಿ ಹತರಾಗಿದ್ದರು. ಅಕಸ್ಮಾತ್ ಕ್ರೈಮಿಯಾದಲ್ಲೇನಾದರೂ ಸಂಗ್ರಾಮ ನಡೆದರೂ ಅದು ಹಿಂಸಾತ್ಮಕವಾಗಿರದಿರಲಿ ಎಂದು ಆಶಿಸೋಣ.  

No comments:

Post a Comment