Thursday 6 March 2014

ಇಸ್ರೇಲ್ - ಪ್ಯಾಲೆಸ್ಟೈನ್ ಕದನದ ಸಂಕ್ಷಿಪ್ತ ವಿವರ

ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ಗಳ ನಡುವೆ ವರ್ಷಾನುಗಟ್ಟಲೆಯಿಂದ ನಡೆಯುತ್ತಿರುವ ಯುದ್ಧ/ಕಾಳಗದ ಬಗ್ಗೆ ನೀವು ಆಗಾಗ್ಗೆ ದಿನಪತ್ರಿಕೆಗಳಲ್ಲಿ ಓದಿರುತ್ತೀರಿ, ಟೀ.ವಿ ಯಲ್ಲಿ ನೋಡಿರುತ್ತೀರಿ. ಈ ಕದನದ ಹಿನ್ನಲೆ ಏನು ಎಂದು ವಿವರಿಸುವ ಲೇಖನಮಾಲಿಕೆಗಳು, ಸಾಕ್ಷ್ಯಚಿತ್ರಗಳು ಬೇಕಾದಷ್ಟಿವೆ.  ಆದರೆ ಅವುಗಳಲ್ಲಿ ಹೆಚ್ಚಿನವನ್ನ ಅರ್ಥೈಸಿಕೊಳ್ಳಲು ಚರಿತ್ರೆಯ ಗಂಭೀರ ಅಧ್ಯಯನ ಹಾಗೂ ತಿಳುವಳಿಕೆಗಳ ಅಗತ್ಯತೆ ಕಂಡು ಬರುತ್ತದೆ. ಸಾಮಾನ್ಯರಿಗೂ ಅರ್ಥವಾಗುವಂತೆ, ಬರಿಯ ಐದು-ಹತ್ತು ನಿಮಿಷಗಳಲ್ಲಿ ಓದಿ ಮುಗಿಸಬಲ್ಲ ಸಂಕ್ಷಿಪ್ತ ಚಿತ್ರಣ ನೀಡುವಂತಹ ಲೇಖನವೊಂದನ್ನ ಬರೆಯಬೇಕೆಂಬುದು ನನ್ನ ಬಹು ದಿನಗಳ ಆಸೆಯಾಗಿತ್ತು. ಆದ್ದರಿಂದ ಈ ಚಿಕ್ಕ ಲೇಖನ.

ಇತಿಹಾಸ:

ಕ್ರಿಸ್ತ ಶಕ ಎಪ್ಪತ್ತರ ಆಸುಪಾಸಿನಲ್ಲಿ, ಯಹೂದ್ಯರೇ ಹೆಚ್ಚಾಗಿದ್ದ ಈ ಭೂಪ್ರದೇಶವನ್ನ ರೋಮನ್ನರು ಕಬಳಿಸಿದರು. ಆ ಬಳಿಕ ಅಲ್ಲಿಂದ ಕಾಲ್ಕಿತ್ತ ಯಹೂದ್ಯರಲ್ಲಿ ಹೆಚ್ಚಿನವರು ಯೂರೋಪಿನ ದೇಶಗಳಲ್ಲಿ ಅಲ್ಲಲ್ಲಿ ಚದುರಿದಂತೆ ನೆಲೆ ನಿಂತರು. 1453 ರಲ್ಲಿ ಒಟ್ಟೋಮನ್ ಸಾಮ್ರಾಜ್ಯದ ವಿರುದ್ಧ ರೋಮನ್ನರು ಸೋತ ಬಳಿಕ ಈ ಪ್ರಾಂತ್ಯದಲ್ಲಿ ಮುಸಲ್ಮಾನರ ಪ್ರಾಬಲ್ಯ ಹೆಚ್ಚಿತು. ಸುಮಾರು 450 ವರ್ಷಗಳ ಬಳಿಕ ನಡೆದ ಮೊದಲನೇ ಮಹಾಯುದ್ಧ ಮುಗಿಯುವುದರೊಂದಿಗೆ ಒಟ್ಟೋಮನ್ ಸಾಮ್ರಾಜ್ಯವೂ ಮುಳುಗಿದಾಗ ಈ ಪ್ರದೇಶಕ್ಕೆ ಬ್ರಿಟಿಷ್ ಪ್ಯಾಲೆಸ್ಟೈನ್ (British Mandate of Palestine) ಎಂದು ನಾಮಕರಣ ಮಾಡಲಾಯಿತು. ಈಗಿನ ಇಸ್ರೇಲ್, ಜೋರ್ಡನ್, ಸಿರಿಯಾ, ವೆಸ್ಟ್ ಬ್ಯಾಂಕ್ ಹಾಗೂ ಗಾಜಾ ಪಟ್ಟಿಗಳನ್ನೊಳಗೊಂಡ ಈ ವಿಶಾಲ ಪ್ರಾಂತ್ಯದಲ್ಲಿ ಆಗ ಅಂದಾಜು 85% ಮುಸಲ್ಮಾನರು, 10% ಕ್ರಿಶ್ಚಿಯನ್ನರು ಹಾಗೂ 5% ಯಹೂದ್ಯರು ವಾಸವಾಗಿದ್ದರು. ಇದೇ ಸಮಯದಲ್ಲಿ ತಮ್ಮದೇ ಆದ ಒಂದು ರಾಷ್ಟ್ರ ಬೇಕೆಂಬ ಯಹೂದ್ಯರ ಚಳುವಳಿ ಯುರೋಪಿನಲ್ಲಿ ಅಲ್ಲಲ್ಲಿ ಆರಂಭವಾಗಿತ್ತು. ಯಹೂದ್ಯರ ಈ ಚಳುವಳಿಗೆ (Zionism) ಕ್ರಿಶ್ಚಿಯನ್ನರ ಬೆಂಬಲ ಕೂಡ ಇತ್ತು.

ಯಹೂದೀ ಚಳುವಳಿಯ ಹರಿಕಾರ ಥಿಯೋಡೋರ್ ಹರ್ತ್ಸೆಲ್ 
ಆಫ್ರಿಕಾ, ಅಮೇರಿಕಾ ಭೂಖಂಡಗಳಿಗಿಂತ, ಒಂದಾನೊಂದು ಕಾಲದಲ್ಲಿ ತಮ್ಮ ಆಳ್ವಿಕೆಯಲ್ಲಿದ್ದ ಪ್ಯಾಲೆಸ್ಟೈನ್ ಭೂಮಿಯೇ ಹೊಸ ರಾಷ್ಟ್ರ ನಿರ್ಮಾಣಕ್ಕೆ ಪ್ರಶಸ್ತವಾದ ಸ್ಥಳ ಎಂಬ ನಂಬಿಕೆಯೊಂದಿಗೆ ಸಾವಿರಾರು ಯಹೂದ್ಯರು ಪ್ಯಾಲೆಸ್ಟೈನ್ ಗೆ ವಲಸೆ ಬರಲಾರಂಭಿಸಿದರು. ಇದೇ ಸಮಯದಲ್ಲಿ ಹಿಟ್ಲರ್ ಕೂಡ ಯಹೂದ್ಯರ ನಿರ್ನಾಮಕ್ಕೆ ಹೊರಟಿದ್ದನಾದ್ದರಿಂದ, ಯೂರೋಪಿನ ಯಹೂದೀ ವಲಸೆಗಾರರ ಸಂಖ್ಯೆ ದಿನೇ ದಿನೇ ಹೆಚ್ಚತೊಡಗಿತು. ಸ್ವಾಭಾವಿಕವಾಗಿಯೇ ಪ್ಯಾಲೆಸ್ಟೈನಿನ ಬಹುಸಂಖ್ಯಾತ ಮುಸಲ್ಮಾನರು ಇದರಿಂದ ಕ್ರುದ್ಧರಾದರು. ಜನಾಂಗೀಯ ಗಲಭೆಗಳು ಆರಂಭವಾದವು. 

1947ರ ವಿಭಜನೆ:

ಎರಡನೇ ಮಹಾಯುದ್ಧದ ಬಳಿಕ ರಚನೆಯಾದ ವಿಶ್ವಸಂಸ್ಥೆ ಪ್ರಭಾವೀ ಯಹೂದ್ಯರ ಒತ್ತಡಕ್ಕೆ ಮಣಿದು ಪ್ಯಾಲೆಸ್ಟೈನನ್ನ ವಿಭಜಿಸಲು ಒಪ್ಪಿಗೆ ನೀಡಿತು. ವಿಭಜನೆಗೂ ಮೊದಲು ಆ ಪ್ರದೇಶದ ಕೇವಲ 7% ಭೂಮಿಯ ಒಡೆತನ ಹೊಂದಿದ್ದ ಯಹೂದ್ಯರಿಗೆ ಇಸ್ರೇಲ್ ಎಂಬ ದೇಶ ರಚಿಸಿಕೊಳ್ಳಲು 55% ಭೂಮಿಯನ್ನ ಕೊಡಲಾಯಿತು. 

1948ರ ಯುದ್ಧ:

ವಿಭಜನೆಯ ಬಳಿಕ ನಡೆದ ಈ ಯುದ್ಧದಲ್ಲಿ ಪ್ಯಾಲೆಸ್ಟೈನಿನ ಭೂಪಟವೇ ಬದಲಾಯಿತು. ಪಾಶ್ಚಿಮಾತ್ಯರ ಬೆಂಬಲದೊಂದಿಗೆ ಯುದ್ಧ ನಡೆಸಿದ ಇಸ್ರೇಲ್ ಏನಿಲ್ಲವೆಂದರೂ 30-40 ಮಾರಣಹೋಮಗಳನ್ನ ನಡೆಸಿತು. ಸಾವಿರಾರು ಪ್ರಜೆಗಳ ಸಾವಿನ ಬಳಿಕ ಸುಮಾರು ಏಳರಿಂದ ಎಂಟು ಲಕ್ಷ ಪಲೆಸ್ತೀನಿಯನ್ನರು ಅಲ್ಲಿಂದ ಒಕ್ಕಲೆದ್ದು ಇತರೆ ಅರಬ್ ರಾಷ್ಟ್ರಗಳೆಡೆ ಪ್ರಯಾಣ ಬೆಳೆಸಿದರು. 

ಲೆಬನಾನ್ ಕಡೆ ಪ್ರಯಾಣಿಸುತ್ತಿರುವ ನಿರಾಶ್ರಿತರು 
ಯುದ್ಧಕ್ಕೆ ಮೊದಲು 55% ಭೂಮಿಯ ಹಿಡಿತ ಹೊಂದಿದ್ದ ಇಸ್ರೇಲ್, ಯುದ್ಧದ ಬಳಿಕ 78% ಪ್ರದೇಶವನ್ನ ಕಬಳಿಸಿತ್ತು. ಐನೂರಕ್ಕೂ ಹೆಚ್ಚು ಹಳ್ಳಿ-ಪಟ್ಟಣಗಳು ನಿರ್ನಾಮವಾಗಿದ್ದವು! ಹೊಸ ಭೂಪಟವನ್ನ ರಚಿಸಿದ ಇಸ್ರೇಲ್ ಆನಂತರದ ಅದೆಷ್ಟೋ ವರ್ಷಗಳ ಕಾಲ ಪ್ಯಾಲೆಸ್ಟೈನ್ ಎಂಬ ದೇಶವೇ ಇರಲಿಲ್ಲ ಎಂದೇ ವಾದಿಸಿತು!!

1967ರ ಆರು ದಿನಗಳ ಯುದ್ಧ:

ಜೂನ್ 5, 1967 ರಿಂದ 10 ರವರೆಗೆ ಈ ಯುದ್ಧ ಇಸ್ರೇಲ್ ಮತ್ತು ಈಜಿಪ್ಟ್, ಸಿರಿಯಾ ಹಾಗೂ ಜೋರ್ಡನ್ ಗಳ ನಡುವೆ ನಡೆಯಿತು. ಕೇವಲ ಆರು ದಿನಗಳು ನಡೆದ ಈ ಕದನದಲ್ಲಿ ಇಸ್ರೇಲ್; ಸಿನಾಯಿ ದ್ವೀಪ ಹಾಗೂ ಗಾಜಾ ಪಟ್ಟಿಯನ್ನ ಈಜಿಪ್ಟಿನಿಂದ, ಪೂರ್ವ ಜೆರುಸಲೇಮ್ ಹಾಗೂ ವೆಸ್ಟ್ ಬ್ಯಾಂಕನ್ನ ಜೋರ್ಡನ್ನಿನಿಂದ ಹಾಗೂ ಗೋಲನ್ ಪ್ರಾಂತ್ಯವನ್ನ ಸಿರಿಯಾದಿಂದ ವಶಪಡಿಸಿಕೊಂಡಿತು. ಯುದ್ಧದಲ್ಲಿ ಇಸ್ರೇಲಿನ ಸೈನ್ಯದ ಸಾವಿರ-ಎರಡು ಸಾವಿರ ಸೈನಿಕರು ಹತರಾದರೆ; ಜೋರ್ಡನ್, ಸಿರಿಯಾ ಹಾಗೂ ಈಜಿಪ್ಟಿನ ಸೈನ್ಯಗಳು ಒಟ್ಟುಸೇರಿ ಮೂವತ್ತರಿಂದ ನಲವತ್ತು ಸಾವಿರ ಸೈನಿಕರನ್ನ ಕಳೆದುಕೊಂಡವು. 





















ಸಧ್ಯದ ಪರಿಸ್ಥಿತಿ:

  1. ಇಸ್ರೇಲಿನ ಜೈಲುಗಳಲ್ಲಿ ಅಂದಾಜು ಹತ್ತು ಸಾವಿರ ಪ್ಯಾಲೆಸ್ತಿನಿಯರನ್ನ ಖೈದಿಗಳಾಗಿ ಇರಿಸಲಾಗಿದೆ.
  2. ವೆಸ್ಟ್ ಬ್ಯಾಂಕ್ ಹಾಗೂ ಗಾಜಾ ಪಟ್ಟಿ ಈಗಲೂ ಇಸ್ರೇಲಿನ ಹಿಡಿತದಲ್ಲೇ ಇವೆ.
  3. ಸಿನಾಯಿ ಪ್ರಾಂತ್ಯವನ್ನ ಈಜಿಪ್ಟಿಗೆ ಹಿಂದಿರುಗಿಸಿಯಾಗಿದೆ.
  4. ಬೇರೆ ಯಾವುದೇ ದೇಶಕ್ಕೆ ಮಾಡುವುದಕ್ಕಿಂತ ಹೆಚ್ಚಿನ ಧನಸಹಾಯವನ್ನ ಅಮೇರಿಕ ಇಸ್ರೇಲಿಗೆ ಮಾಡುತ್ತದೆ (ದಿನಕ್ಕೆ 8 ದಶಲಕ್ಷ ಡಾಲರ್!)

No comments:

Post a Comment